ದೇಶದ ರೈತರಿಗೆ ಕೇಂದ್ರ ಸರ್ಕಾರದಿಂದ ಗುಡ್‌ನ್ಯೂಸ್. ಪ್ರಧಾನಮಂತ್ರಿ ಫಸಲ್ ಭೀಮ ಯೋಜನೆಯಡಿ 3200 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡುತ್ತಿದ್ದು, ದೇಶದಾದತ್ಯಂತ 30 ಲಕ್ಷ ರೈತರಿಗೆ ಅನುಕೂಲವಾಗಲಿದೆ. ಇನ್ನು ಶೀಘ್ರ ಹಣ ರೈತರ ಖಾತೆಗೆ ಜಮೆಯಾಗುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ, ವಿಮಾ ಕಂಪನಿಗಳಿಗೆ ದಂಡ ವಿಧಿಸುವ ಹೊಸ ನಿಯಮ ಜಾರಿಗೆ ತರಲಾಗಿದೆ.
ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಸೋಮವಾರ ಈ ಯೋಜನೆಯಡಿ ರೈತರಿಗೆ ಬೆಳೆ ವಿಮಾ ಪರಿಹಾರವಾಗಿ ಹಣವನ್ನು ಡಿಜಿಟಲ್ ಮೂಲಕ ವರ್ಗಾಯಿಸಲಿದ್ದಾರೆ. ರಾಜಸ್ಥಾನದ ಜುಂಜುನುದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ರಾಜಸ್ಥಾನ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ, ಕೇಂದ್ರ ಕೃಷಿ ರಾಜ್ಯ ಸಚಿವ ಭಗೀರಥ್ ಚೌಧರಿ ಮತ್ತು ರಾಜ್ಯ ಕೃಷಿ ಸಚಿವ ಕಿರೋಡಿ ಲಾಲ್ ಮೀನಾ ಭಾಗವಹಿಸಲಿದ್ದಾರೆ.
ಯಾವ ರಾಜ್ಯದ ರೈತರಿಗೆ ಎಷ್ಟು ಹಣ ಬಿಡುಗಡೆ?
3200 ಕೋಟಿ ರೂಪಾಯಿಯಲ್ಲಿ ಮಧ್ಯಪ್ರದೇಶದ ರೈತರಿಗೆ 1,156 ಕೋಟಿ ರೂಪಾಯಿ, ರಾಜಸ್ಥಾನದದ ರೈತರಿಗೆ 1,121 ಕೋಟಿ ರೂಪಾಯಿ, ಛತ್ತೀಸ್‌ಗಢದ ರೈತರಿಗೆ 150 ಕೋಟಿ ರೂಪಾಯಿ ಮತ್ತು ಇತರ ರಾಜ್ಯಗಳ ರೈತರಿಗೆ 773 ಕೋಟಿ ರೂಪಾಯಿ ತಲುಪಲಿದೆ.
ರಾಜ್ಯಗಳು ತಡ ಮಾಡಿದರೆ ದಂಡ ವಿಧಿಸಲಾಗುವುದು
ಈ ಬಗ್ಗೆ ಮಾತನಾಡಿದ ಕೃಷಿ ಸಚಿವ ಚೌಹಾಣ್, ಕೇಂದ್ರ ಸರ್ಕಾರ ರೈತರಿಗೆ ಅನುಕೂಲವಾಗುವಂತೆ ವಿಮಾ ಪರಿಹಾರವನ್ನು ಸುಲಭಗೊಳಿಸಿದೆ. ರಾಜ್ಯ ಸರ್ಕಾರವು ಅಥವಾ ವಿಮಾ ಕಂಪನಿಗಳು ತನ್ನ ಪಾಲಿನ ಹಣವನ್ನು ತಡ ಮಾಡಿದರೆ ಅದಕ್ಕೆ ಶೇ 12 ರಷ್ಟು ದಂಡ ವಿಧಿಸಲಾಗುತ್ತದೆ. ಈ ದಂಡ ಮೊತ್ತವು ರೈತರಿಗೆ ಸಿಗುತ್ತದೆ ” ಎಂದು ಹೇಳಿದ್ದಾರೆ.
2016 ರಲ್ಲಿ ಫಸಲ್ ಭೀಮಾ ಯೋಜನೆ ಪ್ರಾರಂಭವಾದಾಗಿನಿಂದ, ರೈತರು 35,864 ಕೋಟಿ ರೂಪಾಯಿ ಪ್ರೀಮಿಯಂ ಪಾವತಿಸಿದ್ದಾರೆ. ಅದಕ್ಕೆ ಪ್ರತಿಯಾಗಿ 1.83 ಲಕ್ಷ ಕೋಟಿ ರೂಪಾಯಿ ಪರಿಹಾರ ವಿತರಿಸಲಾಗಿದೆ. ರೈತರು ಕಟ್ಟಿದ ಪ್ರೀಮಿಯಂಗಿಂತ ಸರಾಸರಿ ಐದು ಪಟ್ಟು ಹೆಚ್ಚು ಪರಿಹಾರ ನೀಡಲಾಗಿದೆ. ಇದು ಸರ್ಕಾರ ರೈತರಿಗೆ ಎಷ್ಟರ ಮಟ್ಟಿಗೆ ಸಹಾಯ ಮಾಡುತ್ತಿದೆ ಎಂಬುದನ್ನು ತೋರಿಸುತ್ತದೆ ಎಂದು ಕೃಷಿ ಸಚಿವರು ಹೇಳಿದ್ದಾರೆ.
ಪರಿಹಾರ ವಿತಣೆ ಸುಧಾರಣೆ
ಕೃಷಿ ಸಚಿವಾಲಯವು ತಂತ್ರಜ್ಞಾನವನ್ನು ಬಳಸಿಕೊಂಡು ಪರಿಹಾರ ವಿತರಣೆಯನ್ನು ಸುಧಾರಿಸಿದೆ. ಮೊಬೈಲ್ ಅಪ್ಲಿಕೇಶನ್, ಕೃಷಿ ರಕ್ಷಕ್ ಪೋರ್ಟಲ್ ಮತ್ತು 14447 ಸಹಾಯವಾಣಿ ಸಂಖ್ಯೆ ಮುಂತಾದವುಗಳನ್ನು ಪರಿಚಯಿಸಿದೆ. ಇವುಗಳಿಂದ ಪರಿಹಾರ ವಿತರಣೆ ವೇಗವಾಗಿದೆ, ಹೆಚ್ಚು ಪಾರದರ್ಶಕವಾಗಿದೆ, ನಿಖರ ಮಾಹಿತಿ ಸಿಗುತ್ತದೆ. ( ಫಸಲ್ ಭೀಮಾ ಯೋಜನೆ ನೋಂದಣಿಗೆ ರೈತರು ನಿರಾಸಕ್ತಿ)
ಗ್ರಾಮದಲ್ಲಿಯೇ ನೋಂದಣಿಗೆ ಅವಕಾಶ
ರೈತರು ಗ್ರಾಮ ಮಟ್ಟದಲ್ಲಿಯೇ ನೋಂದಣಿ ಮಾಡಿಕೊಳ್ಳಬಹುದು. ಹವಾಮಾನ ವೈಪರೀತ್ಯದಿಂದ ಬೆಳೆ ನಷ್ಟವಾದರೆ, ಈ ಯೋಜನೆಗಳ ಮೂಲಕ ರೈತರು ಸುಲಭವಾಗಿ ಪರಿಹಾರ ಪಡೆಯಬಹುದು.