ಮುಂಗಾರು ಮಳೆಯ ಋತು ಕೊನೆಗೊಳ್ಳಲು ಕೆಲವೇ ದಿನಗಳು ಉಳಿದಿವೆ. ಈ ವೇಳೆ ವಿವಿಧ ಭಾಗಗಳಲ್ಲಿ ಮಳೆ ಮತ್ತೆ ಅಬ್ಬರಿಸುವ ಮುನ್ಸೂಚನೆ ನೀಡಿದೆ. ಇದಕ್ಕೆ ಈಗಾಗಲೇ ಉಂಟಾಗಿರುವ ವೈಪರೀತ್ಯಗಳು ಕಾರಣವಾಗಿದೆ. ದಕ್ಷಿಣ ಒಡಿಶಾ-ಉತ್ತರ ಆಂಧ್ರ ಕರಾವಳಿಯ ಬಳಿ ವಾಯುಭಾರ ಕುಸಿತ ಉಂಟಾಗಿದೆ.
ಇದು ಗಂಟೆಗೆ 12 ಕಿಮೀ ವೇಗದಲ್ಲಿ ಪಶ್ಚಿಮಕ್ಕೆ ಬೀಸುತ್ತಿದೆ. ಪ್ರಸ್ತುತ ಇದು ದಕ್ಷಿಣ ಒಡಿಶಾದಲ್ಲಿ ಕೇಂದ್ರೀಕೃತವಾಗಿದ್ದು, ಮುಂದಿನ 24 ಗಂಟೆಗಳಲ್ಲಿ ಕ್ರಮೇಣ ದುರ್ಬಲಗೊಂಡು ಸ್ಪಷ್ಟ ಕಡಿಮೆ ಒತ್ತಡದ ಪ್ರದೇಶವಾಗಿ ಪರಿಣಮಿಸುವ ಸಾಧ್ಯತೆ ಇದೆ. ಇದರಿಂದಾಗಿ ದೇಶದ ವಿವಿಧ ಭಾಗಗಳಲ್ಲಿ ಮುಂದಿನ 3-5 ದಿನ ಧಾರಾಕಾರ ಮಳೆ ಬರಲಿದೆ.ವಾಯು ಚಂಡಮಾರುತ ಪ್ರಸರಣವು ಗೋವಾ, ತೆಲಂಗಾಣ ಮತ್ತು ಉತ್ತರ ಕರ್ನಾಟಕದವರೆಗೂ ವಿಸ್ತರಿಸಿದೆ. ಜೊತೆಗೆ, ಸೆಪ್ಟೆಂಬರ್ 30ರಂದು ಉತ್ತರ ಅಂಡಮಾನ್ ಸಮುದ್ರದಲ್ಲಿ ಹೊಸ ಚಂಡಮಾರುತ ವ್ಯವಸ್ಥೆ ಹುಟ್ಟುವ ಸಾಧ್ಯತೆ ಇದೆ.
ಇದರ ಪರಿಣಾಮವಾಗಿ ಅಕ್ಟೋಬರ್ 1ರಂದು ಉತ್ತರ ಮತ್ತು ಮಧ್ಯ ಬಂಗಾಳ ಕೊಲ್ಲಿಯಲ್ಲಿ ಮತ್ತೊಂದು ಕಡಿಮೆ ಒತ್ತಡ ಉಂಟಾಗಬಹುದು ಎಂದು ಹವಾಮಾನ ಇಲಾಖೆ ಅಂದಾಜಿಸಿದೆ.ಇಂದು ಸೆಪ್ಟೆಂಬರ್ 27ರಿಂದ ಅಕ್ಟೋಬರ್ 3ರವರೆಗೆ ಒಡಿಶಾ, ವಿದರ್ಭ, ಗಂಗಾ ಪಶ್ಚಿಮ ಬಂಗಾಳ, ಛತ್ತೀಸ್ಗಢ, ಜಾರ್ಖಂಡ್ ಮತ್ತು ಮಧ್ಯಪ್ರದೇಶದಲ್ಲಿ ಗುಡುಗು ಮಿಂಚು ಸಹಿತ ಭಾರೀ ಮಳೆಯ ನಿರೀಕ್ಷೆ ಇದೆ. ತಮಿಳುನಾಡು, ಕೇರಳ, ಕರ್ನಾಟಕ, ಮಹಾರಾಷ್ಟ್ರ, ಆಂಧ್ರ ಪ್ರದೇಶದಲ್ಲಿ ಇಂದು ಸಹ ಸಾಧಾರಣದಿಂದ ಭಾರೀ ಮಳೆ ಆಗಲಿದೆ.ಮಧ್ಯ ಮಹಾರಾಷ್ಟ್ರ, ಕೊಂಕಣ-ಗೋವಾ, ಗುಜರಾತ್ ಪ್ರದೇಶ ಮತ್ತು ಮರಾಠವಾಡದಲ್ಲಿ ಸೆಪ್ಟೆಂಬರ್ ಅಕ್ಟೋಬರ್ 3ರವರೆಗೆ ಹಲವೆಡೆ ಮಳೆಯಾಗಲಿದೆ. ಘಾಟ್ ಪ್ರದೇಶಗಳಲ್ಲಿ ಕೆಲ ದಿನಗಳಲ್ಲಿ ಅತಿಭಾರೀ ಮಳೆಯ ಸಂಭವ ಇದೆ. ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರದಲ್ಲಿ ಸೆಪ್ಟೆಂಬರ್ 29ರಿಂದ ಅಕ್ಟೋಬರ್ 3ರವರೆಗೆ ಮಳೆಯ ನಿರೀಕ್ಷೆ ಇದೆ.
ಅಕ್ಟೋಬರ್ 2 ಮತ್ತು 3ರಂದು ಅತಿಭಾರೀ ಮಳೆ ಸುರಿಯಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.ಅರಬ್ಬಿ ಸಮುದ್ರ ಹಾಗೂ ಬಂಗಾಳಕೊಲ್ಲಿ ಭಾಗದಲ್ಲಿ ಉಂಟಾಗಿರುವ ವೈಪರೀತ್ಯಗಳ ಕಾರಣದಿಂದಾಗಿ ದಕ್ಷಿಣ ಭಾರತದ ವಿವಿಧೆಡೆ ಮಳೆ ಮುಂದುವರಿಯಲಿದೆ. ಸೆಪ್ಟೆಂಬರ್ 27 ಮತ್ತು 28ರಂದು ತೆಲಂಗಾಣ, ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಬಲವಾದ ಗಾಳಿ ಸಮೇತವಾಗಿ ಧಾರಾಕಾರ ಮಳೆ ಆಗಲಿದೆ. ಕರಾವಳಿ ಆಂಧ್ರ ಮತ್ತು ರಾಯಲಸೀಮಾದಲ್ಲಿ ಮುಂದಿನ 5 ದಿನಗಳಲ್ಲಿ ಗಂಟೆಗೆ 30-50 ಕಿಮೀ ವೇಗದ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.