ರಾಜ್ಯದಲ್ಲಿ ಮಳೆ, ಪ್ರವಾಹದಿಂದಾಗಿ ಸಂಭವಿಸಿದ ಬೆಳೆಹಾನಿಗೆ NDRF ನಿಯಮದಂತೆ ಕೇಂದ್ರದಿಂದ ನೀಡಲಾಗುವ ಪರಿಹಾರದ ಜೊತೆಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ ಪ್ರತಿ ಹೆಕ್ಟೇರ್ ಗೆ 8500 ರೂ. ಸೇರಿಸಿ ನೊಂದ ರೈತರಿಗೆ ಪರಿಹಾರ ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಕೇಂದ್ರದ ನೆರವಿಗೆ ಕಾಯದೆ ಸಮೀಕ್ಷೆ ಮುಗಿದ ಕೂಡಲೇ ರಾಜ್ಯದ ಪಾಲಿನ ಪರಿಹಾರ ನೀಡಲಾಗುವುದು ಎಂದು ಕಲಬುರಗಿ, ವಿಜಯಪುರ, ಬೀದರ್, ಯಾದಗಿರಿ ಜಿಲ್ಲೆಗಳ ವ್ಯಾಪ್ತಿಯಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ ಸಿಎಂ ತಿಳಿಸಿದ್ದಾರೆ.ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪರಿಹಾರ ಕಾರ್ಯಗಳ ಬಗ್ಗೆ ಸೂಚನೆ ನೀಡಿದ ಸಿಎಂ, NDRF ನಿಯಮದಡಿ ಖುಷ್ಕಿ ಜಮೀನಿಗೆ ಪ್ರತಿ ಹೆಕ್ಟೇರ್ ಗೆ 8500 ರೂ. ಪರಿಹಾರ ಇದ್ದು ಇದಕ್ಕೆ ಹೆಚ್ಚುವರಿಯಾಗಿ ರಾಜ್ಯದಿಂದ 8,500 ರೂ. ಸೇರಿಸಿ ಒಟ್ಟು 17000 ರೂ. ರೈತರಿಗೆ ನೀಡಲಾಗುವುದು.
ನೀರಾವರಿ ಜಮೀನಿಗೆ ನಿಯಮದ ಪ್ರಕಾರ ಪ್ರತಿ ಹೆಕ್ಟೇರ್ ಗೆ 17500 ರೂ. ಕೊಡಬೇಕಿದೆ ಇದಕ್ಕೆ ರಾಜ್ಯದಿಂದ ಹೆಚ್ಚುವರಿಯಾಗಿ 8500 ನೀಡಲಾಗುವುದು. ಬಹು ವಾರ್ಷಿಕ ಬೆಳೆಗಳಿಗೆ 22,500ರೂ. ನೀಡಲಿದ್ದು ಹೆಚ್ಚುವರಿಯಾಗಿ 8500 ರೂ. ಸೇರಿಸಿ ಒಟ್ಟು 31,000 ರೂ. ನೀಡಲಾಗುವುದು. ಇದರಿಂದ ಅತಿವೃಷ್ಟಿ ಪೀಡಿತ ರೈತರಿಗೆ ಹೆಚ್ಚುವರಿಯಾಗಿ 2 ಸಾವಿರ ಕೋಟಿ ರೂ. ಪರಿಹಾರ ನೀಡಿದಂತಾಗುತ್ತದೆ ಎಂದು ತಿಳಿಸಿದ್ದಾರೆ.